ಏಕೋರಾಮ: 1150-. ವೀರಶೈವ ಆಚಾರ್ಯರಲ್ಲಿ ಒಬ್ಬ. ಬಸವಣ್ಣನವರ ಸಮಕಾಲೀನ. ಜನ್ಮಸ್ಥಳ ಕಲ್ಬುರ್ಗಿ ಜಿಲ್ಲೆಯ ಮುದೇನೂರು ಅಥವಾ ಮುದ್ರಾಪುರ. ತಂದೆ ರಾಮರುದ್ರ, ಹೆಂಡತಿ ಕಾಮಿಕಾದೇವಿ. ರಾಮನಾಥ ಈತನ ಕುಲದೈವ. ರಾಮನಾಥಾಚಾರ್ಯರಿಂದ ಶಿವದೀಕ್ಷೆಯನ್ನು ಪಡೆದು ಶಿವಪಾರಮ್ಯವನ್ನು ನೆಲೆಗೊಳಿಸಿ ವೀರಶೈವರ ಪಂಚಪೀಠಗಳಲ್ಲಿ ಒಂದಾದ ಹಿಮಾಲಯದ ಕೇದಾರ ಪೀಠದ ಅಧ್ಯಕ್ಷನಾಗಿ ಆಚಾರ್ಯನೆನಿಸಿಕೊಂಡ. ಮೊದಲು ಶೈವನಾಗಿದ್ದು ಶಿವದೀಕ್ಷೆಯನ್ನು ಪಡೆದ ಮೇಲೆ ವೀರಶೈವವನ್ನು ಆಚರಿಸುತ್ತ ಮುದ್ರಾಪುರದ ರಾಜ ಭಾಸ್ಕರನ ಆಸ್ಥಾನದಲ್ಲಿ ಅಯೋಧ್ಯೆಯ ವ್ಯಾಸದೀಕ್ಷಿತನನ್ನು ವಾದದಲ್ಲಿ ಸೋಲಿಸಿ ಅವನಿಗೆ ಶಿವದೀಕ್ಷೆಯನ್ನು ಕೊಟ್ಟ. ಜೈನರಿಗೆ ಮತ್ತು ಬ್ರಾಹ್ಮಣರಿಗೆ ಲಿಂಗದೀಕ್ಷೆಯನ್ನು ಕೊಟ್ಟು ಅನೇಕ ಮಹಿಮೆಗಳನ್ನು ಮೆರೆದ. ದೇವರ ದಾಸಿಮಯ್ಯನಾದ ಮೇಲೆ ಅದೇ ಪ್ರಾಂತ್ಯದಲ್ಲಿ ಹುಟ್ಟಿ ಆತನ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸಿ ಆ ಧರ್ಮದಲ್ಲಿ ಉನ್ನತ ಸ್ಥಾನವನ್ನು ಗಳಿಸಿದ ಮಹಂತನೀತ. ಹರದನಹಳ್ಳಿಯ ನಂಜಣಾಚಾರ್ಯ ಬರೆದಿರುವ ಏಕೋರಾಮಾರಾಧ್ಯ ಪುರಾಣದಲ್ಲಿ ಇವನ ಕಥೆ ವರ್ಣಿತವಾಗಿದೆ. ಅದರ ಪ್ರಕಾರ ಇವನ ವಂಶಾವಳಿ ಈ ರೀತಿ ಇದೆ: ದೂರ್ವಾಸ ದೇವನ ಮಗ ಶಿವಾನಂದ, ಅವನ ಮಗ ಶ್ರೀಕಂಠ, ಅವನ ಮಗ ರಾಮರುದ್ರ. ಈ ರಾಮರುದ್ರನ ಮಗನೇ ಏಕೋರಾಮ. ಕೊನೆಯಲ್ಲಿ ಏಕೋರಾಮ ಶಂಕುಕರ್ಣನಿಗೆ ದೀಕ್ಷೆ ಕೊಟ್ಟು ಗುರುಪಟ್ಟವನ್ನು ಕಟ್ಟಿ ರಾಮನಾಥಲಿಂಗದಲ್ಲಿಯೇ ಐಕ್ಯವಾದ. 						(ಬಿ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ